ಮುದ್ರಣ ಸುಭಾಶಿಲೆ -
ಅವಸಾದನಶಿಲೆಗಳಲ್ಲಿ ಶೇಕಡಾ ಸುಮಾರು 30 ಭಾಗ ಕಂಡುಬರುವ ಸುಣ್ಣಗಲ್ಲು (ಲಿತೊಗ್ರಾಫಿಕ್ ಲೈಮ್‍ಸ್ಟೋನ್). ಇವುಗಳಲ್ಲಿ ಜೈವಿಕ (ಆಗ್ರ್ಯಾನಿಕ್) ಮತ್ತು ರಾಸಾಯನಿಕ (ಕೆಮಿಕಲ್) ಎಂಬ ಎರಡು ಮುಖ್ಯ ವರ್ಗಗಳಿವೆ. ಆಳಕಡಲ ನೀರಿನ ತಳದಲ್ಲಿ ಇವು ಶೇಖರವಾಗುತ್ತವೆ. ಭೂಚರಿತ್ರೆಯ ಮಧ್ಯಜೀವಿ ಕಲ್ಪಥ ಮಧ್ಯಯುಗ ಜ್ಯುರಾಸಿಕ್ ಸ್ತೋಮದಲ್ಲಿ ಕಲ್ಲಚ್ಚಿಗೆ ವಿಶೇಷವಾಗಿ ಬಳಸುವ ಅತ್ಯುತ್ಕøಷ್ಟ ಸುಣ್ಣಕಲ್ಲು ಆಗ್ನೇಯ ಬವೇರಿಯ ಪ್ರಾಂತದಲ್ಲಿ ಸೊಲೆನ್‍ಹೋಫೆನ್ ಮತ್ತು ಪಾಪ್ಪೆನ್‍ಹೀಮ್ ಎಂಬಲ್ಲಿ ದೊರೆಯುತ್ತವೆ. ಎಂದೇ ಇವುಗಳಿಗೆ ಸೊಲೆನ್‍ಹೋಫೆನ್ ಶಿಲೆಗಳೆಂಬ ಹೆಸರೂ ಇದೆ. ಇಲ್ಲಿಯ ಸಂಚಯನ ಕಾಲ ಸುಮಾರು 150-130 ದಶಲಕ್ಷ ವರ್ಷ ಪ್ರಾಚೀನವಿರಬಹುದು. ಇವುಗಳಲ್ಲಿ ಆರ್ಕಿಯಾಪ್ಟೆರಿಕ್ಸ್ ಎಂಬ ಅತ್ಯಂತ ಪ್ರಾಚೀನ ಪಕ್ಷಿಯ ಅವಶೇಷಗಳು ಸಿಕ್ಕಿವೆ. ಅತ್ಯಂತ ಪುಷ್ಕಳವಾದ ಫಾಸಿಲುಗಳಿರುವ ಬಲು ತೆಳು ಮತ್ತು ಸಪಾಟಪದರಗಳಿರುವ ಹಾಲು ಕೆನೆಯಂತೆ ನಸುಹಳದಿಬಣ್ಣ ಅಥವಾ ಕಂದುಬಣ್ಣವಿರುವ ಮತ್ತು ಅತ್ಯಂತ ಸೂಕ್ಷ್ಮಕಣಗಳಿಂದ ನಿರ್ಮಿತವಾಗಿರುವ ಈ ಶಿಲೆಗೆ ಬಲು ಪ್ರಸಿದ್ಧಿ ದೊರಕಿದೆ.

	ಭಾರತದಲ್ಲಿ ಒರಿಸ್ಸ ರಾಜ್ಯದ ಕಡಪಾ (ಕೇಂಬ್ರಿಯನ್ ಪೂರ್ವ) ಯುಗದ ಶಿಲೆಗಳಲ್ಲಿ, ಸುಮಾರು 60 ಕೋಟಿ ವರ್ಷಗಳ ಹಿಂದೆ ನಿರ್ಮಿತವಾದ ಸುಣ್ಣಕಲ್ಲುಗಳಿವೆ. ಇವನ್ನು ಮುದ್ರಣಕ್ಕೆ ಬಳಸಬಹುದು. ಹಿಮಾಲಯ ಪರ್ವತಶ್ರೇಣಿಗಳಿಗೆ ಸೇರಿದ ಕೋಹತ್ ಮತ್ತು ಥಾಲ್ ನಡುವೆ ಇರುವ ಸಮಾನಾಪರ್ವತ ಪ್ರದೇಶದಲ್ಲಿಯೂ ಎರಡು ಹಂತಗಳಲ್ಲಿ ಸುಣ್ಣಕಲ್ಲುಗಳು ಸಿಕ್ಕಿವೆ. ಒಂದೊಂದು ಹಂತದಲ್ಲಿಯೂ ಇವು ಸುಮಾರು 45 ಮೀ ಎತ್ತರದವರೆಗೆ ಶೇಖರವಾಗಿವೆ. ಇವು ಉತ್ತರ ಕ್ರಿಟೇಷಸ್ ಯುಗದಲ್ಲಿ, 130-120 ದಶಲಕ್ಷ ವರ್ಷಗಳ ಹಿಂದೆ, ಸಂಗೃಹೀತವಾಗಿವೆ.
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ